ಷಿಂಟೋ
	ಜಪಾನ್ ದೇಶದ ಸ್ಥಳೀಯ ಧರ್ಮ. ಇದನ್ನು ಜಪಾನೀಭಾಷೆಯಲ್ಲಿ ದೈವಮಾರ್ಗ (ಕಾಮೀನೋಮಿಚಿ) ಎಂದು ಕರೆಯುತ್ತಾರೆ. ಷಿಂಟೋ ಎಂಬ ಹೆಸರು ಚೀನಿ ಮೂಲದ್ದೆಂದು ತಿಳಿದು ಬರುತ್ತದೆ. ಚಕ್ರವರ್ತಿ ಯೋಮೆ ಎಂಬಾತನ ಪುಸ್ತಕದಲ್ಲಿ ನಿಹೋಂಗಿ ಪ್ರಕರಣದಲ್ಲಿ ಷಿಂಟೋಧರ್ಮದ ಪ್ರಸ್ತಾಪವಿದೆ. ಈ ಧರ್ಮದ ಬೆಳೆವಣಿಗೆಯಲ್ಲಿ ಪ್ರಾಕೃತಿಕ ಮತ್ತು ಸಾಂಸ್ಕøತಿಕ ಎಂಬ ಎರಡು ಘಟ್ಟಗಳಿವೆ. ಪ್ರಾಕೃತಿಕ ಘಟ್ಟದಲ್ಲಿ ಪ್ರಕೃತಿ ಪೂಜೆಯೂ ಸಾಂಸ್ಕøತಿಕ ಘಟ್ಟದಲ್ಲಿ ಆತ್ಮವಿಚಾರದ ತತ್ತ್ವ ನಿರೂಪಣೆಯೂ ಕಂಡುಬರುತ್ತದೆ. ಈ ಧರ್ಮದ ಮೇಲೆ ಬೌದ್ಧಧರ್ಮ ಮತ್ತು ಕನ್‍ಫ್ಯೂಷಿಯಸ್ ಧರ್ಮಗಳ ಪ್ರಭಾವ ಹೆಚ್ಚಾಗಿದೆ. 

	ಷಿಂಟೋಧರ್ಮದ ಮೂಲರೂಪದಲ್ಲಿ ಭೂತಾರಾಧನೆ, ಪ್ರಕೃತಿ ಆರಾಧನೆ, ಮಂತ್ರ ಮಾಟಗಳ ಪ್ರಾಮುಖ್ಯ ಹೆಚ್ಚಿದ್ದರೂ ಏಕದೇವತೋ ಪಾಸನೆಯೂ ಸ್ಥೂಲವಾಗಿ ಕಂಡುಬರುತ್ತದೆ. ಪ್ರಾಚೀನ ಜಪಾನೀಯರು ಸೂರ್ಯ, ಚಂದ್ರ, ಬಿರುಗಾಳಿ, ಗುಡುಗು, ಬೆಂಕಿ ಮೊದಲಾದವನ್ನು ಪೂಜಿಸುತ್ತಿದ್ದರು. ಅವರಿಗೆ ಪೃಥ್ವೀ, ಭೂಮಿ, ಸಮುದ್ರ, ಬೆಟ್ಟ, ಭೂಕಂಪನ, ಅಗ್ನಿಪರ್ವತ, ಬಿಸಿನೀರಿನ ಬುಗ್ಗೆ, ಕಲ್ಲು, ಬಂಡೆ ಇತ್ಯಾದಿಗಳ ಅಧಿದೇವತೆಗಳೂ ಪೂಜನೀಯವಾಗಿದ್ದುವು. ಹಾವು, ಹುಲಿ, ತೋಳ, ಹಂದಿ, ಮೊಲ, ರೇಷ್ಮೆಹುಳು, ಮರಗಿಡಗಳು, ದ್ವಿದಳಧಾನ್ಯಗಳಿಗೂ ಅವರು ಪೂಜೆ ಸಲ್ಲಿಸುತ್ತಿದ್ದರು. ಮನುಷ್ಯರನ್ನು ಬದುಕಿದ್ದಾಗಲೂ ಸತ್ತಮೇಲೂ ದೇವತೆಗಳೆಂದು (ಕಾಮಿ) ಕರೆದು ಪೂಜಿಸಲಾಗುತ್ತಿತ್ತು. ಕೆಲವು ವ್ಯಕ್ತಿಗಳನ್ನು ಬದುಕಿದ್ದಾಗಲೇ ದೇವತೆಗಳೆಂದು ಪರಿಗಣಿಸಿ, ದೇವಸ್ಥಾನಗಳಲ್ಲಿ ಪೂಜಿಸಲಾಗುತ್ತಿತ್ತು. ಚಕ್ರವರ್ತಿಯು ಅರ್ಹಿತೋಗಮಿ ಅಥವಾ ಅಕಿಸ್ತುಕ ಎಂದರೆ ಪ್ರತ್ಯಕ್ಷದೇವತೆ (ಅಕಿತ್ಸುಕಮಿ) ಎಂದು ಪರಿಗಣಿಸಲ್ಪಟ್ಟಿದ್ದ. ವೀರಯೋಧರನ್ನೂ ಮಹಾಪುರುಷರನ್ನೂ ಮಾನವರೂಪದ ದೇವರೆಂದೇ ಭಾವಿಸಲಾಗುತ್ತಿತ್ತು. ಮನುಷ್ಯರೂ ಪ್ರಾಣಿಗಳೂ ಪರಸ್ಪರ ರೂಪಾಂತರ ಹೊಂದುವರೆಂಬ ನಂಬಿಕೆಯೂ ಈ ಧರ್ಮದಲ್ಲಿದೆ. ಕಾಮೋ-ಟಕೆಟ್ಸುನುಮಿ-ನೋ-ಮಿಕೋಟೋ ಎಂಬ ಪ್ರಾಚೀನ ಷಿಂಟೋ ಪುರೋಹಿತ ಪವಿತ್ರ ಕಾಗೆಯ ಅವತಾರವೆಂದು ಪೂಜಿಸಲ್ಪಡುತ್ತಿದ್ದ. ಚಕ್ರವರ್ತಿ ಜಿಮ್ಮುವಿನ ತಂದೆ ಪವಿತ್ರ ಮೊಸಳೆ ದೇವತೆಯ (ತೋಯೋತಮಾಹಿಮೆ) ಗರ್ಭದಲ್ಲಿ ಹಿಕೊ ಹೊಹೋದೆಮಿ ನೋ-ಮಿಕೋಟೊ ಎಂಬ ತಂದೆಯಿಂದ ಜನಿಸಿದನೆಂದು ಹೇಳಲಾಗಿದೆ.

	ಷಿಂಟೋಧರ್ಮದ ಪ್ರಕಾರ ಅಮೆ-ನೋಮಿನ ಕನ್‍ಷಿ-ನೋಕಾಮಿ ಎಂಬ ಪ್ರಧಾನ ದೇವತೆ ಎಲ್ಲ ದೇವತೆಗಳಿಗೂ ಮುಖ್ಯಸ್ಥನೆಂದು ಹೇಳಲಾಗಿದೆ. ಇನ್ನೊಬ್ಬ ಪ್ರಧಾನ ದೇವತೆಯಾದ ಕುನಿಟೋಕೋ ತಚೀ-ನೋ-ಕಾಮೀ ಎಂಬ ದೇವತೆಯ ಗುಣಗಳೆಲ್ಲವೂ ಮೊದಲನೆಯ ದೇವತೆಯಲ್ಲಿಯೇ ಐಕ್ಯವಾದುವು. 

	ಪ್ರಾಚೀನ ಷಿಂಟೋಧರ್ಮ ಪ್ರಕೃತಿ ಪೂಜೆಯ ರೂಪದಲ್ಲಿ ಪುರಾಣಗ್ರಂಥಗಳಾದ ಕೋಜಕಿ (ಪುರಾತನ ಇತಿಹಾಸ), ನಿಹೋಂಗಿ (ಜಪಾನ್ ಚರಿತ್ರೆ), ಕೋಗುಷಿಗಳಲ್ಲಿ (ಪ್ರಾಚೀನ ಗ್ರಂಥಗಳು) ಕಂಡು ಬರುತ್ತದೆ. ಪುಂಡನಾದ ಸುಸಾನೋಓ ಎಂಬ ದೇವತೆಯ ಮೇಲೆ ಕೋಪಿಸಿಕೊಂಡು ಸೂರ್ಯ ದೇವತೆ ಗವಿಯೊಂದರಲ್ಲಿ ಅಡಗಿಕೊಂಡಿದ್ದ ಳೆಂದೂ ದೇವತೆಗಳ ಪ್ರಾರ್ಥನೆ ಮನ್ನಿಸಿ ಹೊರಕ್ಕೆ ಬಂದು, ಲೋಕ ಬೆಳಗಿಸಿ ಸುಸಾನೋಓನನ್ನು ಸ್ವರ್ಗದಿಂದ ಭೂಮಿಗೆ ಓಡಿಸಿದಳೆಂದೂ ಪುರಾಣ ಗ್ರಂಥದಲ್ಲಿ ವರ್ಣಿಸಲಾಗಿದೆ. 

	ಜಪಾನೀಯರ ಪುರಾಣಗಳ ಪ್ರಕಾರ ಚಕ್ರವರ್ತಿಯಾದವನು ಸೂರ್ಯ ದೇವತೆಯ ವಂಶಸ್ಥನೆಂದೂ ಸಿಂಹಾಸನಕ್ಕೆ ದೈವದತ್ತವಾದ ಹಕ್ಕುಳ್ಳವ ನೆಂದೂ ಮತ ವಿಷಯದಲ್ಲೂ ಆಡಳಿತ ವಿಷಯದಲ್ಲೂ ಸರ್ವಾಧಿಕಾರ ಉಳ್ಳವನೆಂದೂ ವರ್ಣಿಸಲಾಗಿದೆ. ಈತನನ್ನು ನೈ ಸೈಯಿ ಚಿ (ಸರ್ವಾಧಿಕಾರಿ) ಎಂದು ಕರೆಯಲಾಗಿದೆ. ಷಿಂಟೋಧರ್ಮದ ಪ್ರಕಾರ ಚಕ್ರವರ್ತಿಯೇ ಪ್ರಜೆಗಳ ದೈವ. ಆತ ದೇವರ ಪ್ರತಿನಿಧಿ. ಇದೇ ಷಿಂಟೋಧರ್ಮದ ಮುಖ್ಯ ಲಕ್ಷಣ. ದೇವರು ಸ್ವರ್ಗದಲ್ಲಿರುವ ಆತ್ಮದೇವತೆ ಮತ್ತು ಭೂಮಿಯಲ್ಲಿರುವ ದೇವತೆ. ದೈವಿಕವಾದ ಮಾನವನ ಮನಸ್ಸೇ ದೇವನ ನಿಲಯ, ಮನುಷ್ಯನ ಮನಸ್ಸಿನ ಆಚೆ ಯಾವ ದೇವತೆಯೂ ಇಲ್ಲ-ಇದು ಷಿಂಟೋ ಧರ್ಮದ ತತ್ತ್ವ.									
	(ಎಚ್.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ